ಕೊತ್ತಂಬರಿ
ಅಂಬೆಲಿಫೆರೀ (ಏಪಿಯೇಸೀ) ಕುಟುಂಬಕ್ಕೆ ಸೇರಿದ ಒಂದು ಏಕವಾರ್ಷಿಕ ಮೂಲಿಕ ಸಸ್ಯ (ಕೋರೀಯಾಂಡರ್). ಕೋರಿಯಾಂಡ್ರಮ್ ಸೇಟಿವಂ ಎಂಬುದು ಇದರ ವೈಜ್ಞಾನಿಕ ಹೆಸರು. ಮೆಡಿಟರೇನಿಯನ್ ಪ್ರದೇಶ ಇದರ ತವರು. ಇದರ ಕಾಯಿಗಳನ್ನು (ಕೊತ್ತಂಬರಿ ಬೀಜ) ಸಂಬಾರ ಪದಾರ್ಥವಾಗಿ ಉಪಯೋಗಿಸುವುದರಿಂದ ಹಲವಾರು ದೇಶಗಳಲ್ಲಿ ಇದರ ಬೇಸಾಯ ಇದೆ. ಭಾರತ, ತುರ್ಕಿ, ಇಸ್ರೇಲ್ ಮತ್ತು ಬಾಲ್ಕನ್ ಪ್ರದೇಶಗಳು ಕೊತ್ತಂಬರಿ ಗಿಡದ ಬೇಸಾಯಕ್ಕೆ ಹೆಸರಾಗಿವೆ. ದಕ್ಷಿಣ ಭಾರತದಲ್ಲಿ ಇದರ ಬೇಸಾಯ ಉಳಿದ ಪ್ರದೇಶಗಳಿಗಿಂತ ಹೆಚ್ಚು.

	ಕೊತ್ತಂಬರಿ ಸುಮಾರು 1-3 ಎತ್ತರಕ್ಕೆ ಬೆಳೆಯುವ ಪುಟ್ಟ ಗಿಡ. ಕಾಂಡ ಬಹುವಾಗಿ ಕವಲೊಡೆದಿದ್ದು ಅಂತರಗೆಣ್ಣುಗಳಲ್ಲಿ ಟೊಳ್ಳಾಗಿದೆ. ಕಾಂಡದ ಮೇಲೆಲ್ಲ ನವುರಾದ ಉದ್ದುದ್ದನೆಯ ಏಣುಗಳಿವೆ. ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಕೆಳಗಿನ ಎಲೆಗಳು ಅಗಲವಾದವೂ ಹಾಲೆಗಳಾಗಿ ವಿಭಾಗವಾದ ಅಂಚುಳ್ಳವೂ ಆಗಿವೆ. ಮೇಲಿನ ಎಲೆಗಳು ಕಿರಿದಾಗಿದ್ದು ಛಿದ್ರಛಿದ್ರವಾಗಿ ಸೀಳುಗೊಂಡಿವೆ. ಹೂಗಳು ಬಲುಚಿಕ್ಕವು. ಇವು ದ್ವಿಲಿಂಗಿಗಳು: ಗಿಡದ ತುದಿಯಲ್ಲಿ ಹುಟ್ಟುವ ಸಂಯುಕ್ತ ಛತ್ರಮಂಜರಿ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಪುಷ್ಪಪತ್ರಗಳು 5, ದಳಗಳು 5, ಕೇಸರಗಳು 5, ಅಂಡಾಶಯ ನೀಚಸ್ಥಾನದ್ದು; ಎರಡು ಕಾರ್ಪೆಲ್‍ಗಳಿಂದ ಕೂಡಿದೆ. ಫಲ ಕ್ರೀಮೊಕಾರ್ಪ್ ಎಂಬ ಬಗೆಯದು; ಗುಂಡನೆಯ ಆಕಾರದ್ದೂ ಮೇಲೆಲ್ಲ ಹಲವಾರು ಏಣುಗಳುಳ್ಳದ್ದೂ ಆಗಿದೆ. ಸಾಮಾನ್ಯವಾಗಿ ಫಲವನ್ನೇ ಕೊತ್ತಂಬರಿ ಬೀಜ ಎಂದು ಕರೆಯಲಾಗುತ್ತದೆ. ಇದು ಒಣಗಿದಾಗ ಒಂದೊಂದು ಬೀಜವುಳ್ಳ ಎರಡು ಭಾಗಗಳಾಗಿ ಒಡಯುತ್ತದೆ. ಇವಕ್ಕೆ ಮೆರಿಕಾರ್ಪ್‍ಗಳೆಂದು ಹೆಸರು. ಬೀಜದ ಮೇಲಿರುವ ಏಣುಗಳಲ್ಲಿ ಹಲವಾರು ಸೂಕ್ಷ್ಮವಾದ ಗ್ರಂಥಿಗಳಿದ್ದು ಅವುಗಳಲ್ಲಿ ಒಂದು ಬಗೆಯ ಚಂಚಲ ತೈಲವಿರುತ್ತದೆ. ಈ ಎಣ್ಣೆಯೇ ಕೊತ್ತಂಬರಿಯ ವಿಶಿಷ್ಟ ವಾಸನೆಗೂ ರುಚಿಗೂ ಕಾರಣ.

	ಕೊತ್ತಂಬರಿ ಮುಖ್ಯವಾಗಿ ಸಂಬಾರಸಸ್ಯ. ಇದರ ಒಣಗಿಸಿದ ಬೀಜಗಳನ್ನು ಸಂಬಾರ ವಸ್ತುಗಳ ತಯಾರಿಕೆಯಲ್ಲಿಯೂ ದೇಶೀಯ ಔಷಧಿ ಪದ್ಧತಿಯಲ್ಲಿ ಕೆಲವು ಔಷಧಿಗಳ ವಾಸನೆಯನ್ನು ಹೋಗಲಾಡಿಸಲೂ ಉಪಯೋಗಿಸುತ್ತಾರೆ. ಬೀಜದ ಪುಡಿ ಮತ್ತು ಇತರ ಉತ್ಪನ್ನಗಳಿಗೆ ವಿದೇಶಗಳಲ್ಲೂ ಹೆಚ್ಚಿನ ಬೇಡಿಕೆ ಇದ್ದು ಹೆಚ್ಚಿನ ಮೊತ್ತದಲ್ಲಿ ಇದು ರಫ್ತಾಗುತ್ತದೆ. ಇದರಿಂದ ಕೊತ್ತಂಬರಿ ಭಾರತಕ್ಕೆ ವಿದೇಶಿ ವಿನಿಮಯವನ್ನು ಗಳಿಸಿಕೊಡುವ ಬೆಳೆಗಳಲ್ಲಿ ಪ್ರಮುಖವಾಗಿದೆ. ಕೊತ್ತಂಬರಿ ಸೊಪ್ಪನ್ನು ಸಂಬಾರ ಪದಾರ್ಥವಾಗಿ ಬಳಸುವುದು ಸರ್ವವಿದಿತ. ಚಟ್ನಿ, ಸಾರು ಮುಂತಾದ ವಸ್ತುಗಳಲ್ಲೆಲ್ಲ ಕೊತ್ತಂಬರಿ ಇರಲೇಬೇಕು. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಯೂರೋಪಿನಲ್ಲಿ ಮಾದಕ ಪಾನೀಯಗಳಿಗೆ ಮುಖ್ಯವಾಗಿ ಜಿನ್ ಎಂಬ ಪಾನೀಯಕ್ಕೆ ವಾಸನೆ ಕಟ್ಟಲು ಕೊತ್ತಂಬರಿ ಬೀಜಗಳನ್ನು ಬಳಸುತ್ತಾರೆ. ಬೀಜಗಳಿಗೂ ಸೊಪ್ಪಿಗೂ ಹಲವಾರು ಔಷಧೀಯ ಗುಣಗಳುಂಟು; ಪಚನಕಾರಿ, ಮೂತ್ರಸ್ರಾವ ಉತ್ತೇಜಕ, ಶಕ್ತಿವರ್ಧಕ, ತಂಪುಕಾರಕ, ಪಿತ್ತಹರ, ಕಾಮೋತ್ತೇಜಕ ಮುಂತಾದವೆಂದು ಇವು ಹೆಸರಾಗಿವೆ. ಕೊತ್ತಂಬರಿ ಕಷಾಯವನ್ನು ಗಂಟಲು ಕೆರೆತವನ್ನು ನಿವಾರಿಸಲೂ ಅಜೀರ್ಣಕ್ಕೂ ವಾಂತಿಯನ್ನು ನಿಲ್ಲಿಸುವುದಕ್ಕೂ ಉಪಯೋಗಿಸುತ್ತಾರೆ. ಏಲಕ್ಕಿ ಮತ್ತು ಅಜ್ವಾನದೊಂದಿಗೆ ಸೇರಿಸಿ ಸೇವಿಸಿದರೆ ಒಳ್ಳೆಯ ಜೀರ್ಣಕಾರಿ. ಸಿಡುಬು ತಗುಲಿದಾಗ ದೃಷ್ಟಿಯನ್ನು ಸುರಕ್ಷಿತವಾಗಿಡಲು ಇದರ ಕಷಾಯವನ್ನು ಬಳಸುವ ಕ್ರಮ ರೂಢಿಯಲ್ಲಿದೆ. ಬೀಜಗಳಿಂದ ನಸುಹಳದಿ ಬಣ್ಣದ ತೈಲವನ್ನು ಪಡೆಯಲಾಗುತ್ತದೆ. ಇದನ್ನು ಮಾದಕ ಪಾನೀಯಗಳಿಗಲ್ಲದೆ, ಕೋಕೋ ಮುಂತಾದ ವಸ್ತುಗಳಿಗೆ ವಾಸನೆ ಕೊಡಲೂ ಉಪಯೋಗಿಸುವುದುಂಟು.

	ಕೊತ್ತಂಬರಿಯನ್ನು ನೀರಾವರಿ ಸೌಕರ್ಯವಿರುವ ಪ್ರದೇಶಗಳಲ್ಲಿ ಬೆಳೆಸಬಹುದಾದರೂ ಮಳೆ ಆಶ್ರಿತ ಸ್ಥಳಗಳಲ್ಲೆ ಇದರ ಬೇಸಾಯ ಹೆಚ್ಚು. ಶುದ್ಧ ಬೆಳೆಯಾಗಿಯೊ ಮಿಶ್ರ ಬೆಳೆಯಾಗಿಯೊ ಇದರ ಕೃಷಿ ಮಾಡಬಹುದು. ಬಿತ್ತನೆಯ ಕಾಲ ಭಾರತದ ವಿವಿಧ ಪ್ರದೇಶಗಳಲ್ಲಿ ಬೇರೆಬೇರೆಯಾಗಿದೆ. ಬಂಗಾಳ, ಉತ್ತರ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಬಿತ್ತನೆಯಾದರೆ ಮಹಾರಾಷ್ಟ್ರದಲ್ಲಿ ಮುಂಗಾರು ಮಳೆಯ ಕಾಲದಲ್ಲಿ, ಕರ್ನಾಟಕ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ವರ್ಷಕ್ಕೆ ಎರಡು ಬಾರಿ (ಮೇ-ಆಗಸ್ಟ್ ಮತ್ತು ಅಕ್ಟೋಬರ್-ಜನವರಿ ತಿಂಗಳುಗಳಲ್ಲಿ) ಬಿತ್ತನೆಯಾಗುತ್ತದೆ. ಕೊತ್ತಂಬರಿ ಬೇಸಾಯಕ್ಕೆ ಎಂಥ ಮಣ್ಣಾದರೂ ಆಗಬಹುದು. ಆದರೆ ಎರೆಭೂಮಿ ಉತ್ಕøಷ್ಟವಾದುದು. ಕೊತ್ತಂಬರಿ ಬೇಸಾಯ ಮಾಡಬೇಕಾದ ಭೂಮಿಯನ್ನು 2-3 ಸಾರಿ ಉಳುಮೆ ಮಾಡಿ, ಗೊಬ್ಬರ ಹಾಕಿ, ಅನಂತರ ಬೀಜಗಳನ್ನು ಉಜ್ಜಿ ಎರಡು ಭಾಗ ಮಾಡಿ ಬಿತ್ತನೆ ಮಾಡಬೇಕು. ಬೀಜವನ್ನು ಉಜ್ಜಿದರೆ ಒಂದು ಬೀಜದಿಂದ ಹಲವು ಮೊಳಕೆ ಬೆಳೆದು ಬಹಳ ಒತ್ತಾಗುತ್ತದೆ. ಒಂದು ಎಕರೆಶುದ್ಧಬೆಳೆಗೆ ಸುಮಾರು 5-7 1/2 ಕೆಜಿ. ಬಿತ್ತನೆ ಬೇಕಾಗುತ್ತದೆ. ತೋಟಗಳಲ್ಲಿ ಕೊತ್ತಂಬರಿ ಬೇಸಾಯ ಮಾಡುವಾಗ ಸಾಲುಗಳಲ್ಲಿ ಬಿತ್ತುವುದು ರೂಢಿಯಲ್ಲಿದೆ. ಹೀಗೆ ಮಾಡುವುದರಿಂದ ನೀರಾವರಿ, ಕಳೆ ಕೀಳುವುದು ಮತ್ತು ಕುಯ್ಲು ಇತ್ಯಾದಿ ಕೆಲಸಗಳಿಗೆ ಸುಲಭವಾಗುತ್ತದೆ. ಬೀಜ ಬಿತ್ತಿದ ಸುಮಾರು 10 ದಿವಸಗಳಲ್ಲಿ ಮೊಳೆಯುತ್ತದೆ. ಸುಮಾರು 3-3 1/2 ತಿಂಗಳಲ್ಲಿ ಬೆಳೆ ಕೊಯ್ಲಿಗೆ ಸಿದ್ಧವಾಗುತ್ತದೆ. ಕೊತ್ತಂಬರಿಯ ಕುಯ್ಲು ಉದ್ದೇಶಕ್ಕೆ ತಕ್ಕಂತೆ ಎರಡು ಕಾಲಗಳಲ್ಲಿ ನಡೆಯುತ್ತದೆ. ಸೊಪ್ಪಿಗಾಗಿ ಕೊಯ್ಯುವುದಾದರೆ ಸಸ್ಯಗಳಲ್ಲಿ ಹೂ ಬರುವುದಕ್ಕೆ ಮೊದಲು ಸಸಿಗಳನ್ನು ಬೇರುಸಮೇತ ಕಿತ್ತು ಕಂತೆ ಕಟ್ಟಿ ಮಾರಾಟ ಮಾಡುತ್ತಾರೆ. ಬೀಜಕ್ಕಾಗಿ ಬೆಳೆಸುವುದಾದರೆ, ಬೀಜಗಳು ಬಲಿಯುವವರೆಗೆ ತೋಟದಲ್ಲಿ ಉಳಿಸಿ, ಅನಂತರ ಇಡೀ ಸಸ್ಯಗಳನ್ನು ಕಿತ್ತು ಒಣಗಿಸಿ ಕೊತ್ತಂಬರಿ ಬೀಜಗಳನ್ನು ಬೇರ್ಪಡಿಸುತ್ತಾರೆ.
(ಎಸ್.ವಿ.ಜೆ.; ಬಿ.ಎ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ